ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸ೦ದರ್ಶನ
Share
ಯಕ್ಷಗಾನ ರಂಗದಲ್ಲಿ ಪ್ರಜ್ವಲಿಸುತ್ತಿರುವ ನಕ್ಷತ್ರ ಪ್ರಜ್ವಲ್ ಕುಮಾರ್

ಲೇಖಕರು : ರಾಕೇಶ್ ಕೊಣಾಜೆ
ಶನಿವಾರ, ಜುಲೈ 13 , 2013

ಯುವ ಜನತೆ ಯಕ್ಷಗಾನ ಮೊದಲಾದ ಕಲಾ ಪ್ರಕಾರಗಳಿಂದ ದೂರ ಉಳಿಯುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿರುವ ಈ ದಿನಗಳಲ್ಲಿ, ಆ ಮಾತಿಗ ಅಪವಾದದಂತೆ ಯಕ್ಷಗಾನವನ್ನೇ ತನ್ನ ಜೀವಾಳವನ್ನಾಗಿಸಿ ಯಕ್ಷಗಾನ ರಂಗದಲ್ಲಿನ ಹೆಚ್ಚಿನ ಎಲ್ಲಾ ವೇಷ ಪ್ರಕಾರಗಳಲ್ಲೂ ಪಳಗಿರುವ ಅದರಲ್ಲೂ ಪ್ರಮುಖವಾಗಿ ಬಣ್ಣದ ವೇಷಗಳಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿರುವ 26 ವರ್ಷದ ತರುಣರೊಬ್ಬರು ನಮ್ಮ ನಿಮ್ಮೆಲ್ಲರ ಮಧ್ಯೆ ಇದ್ದಾರೆ. ಅವರೇ ಗುರುವಾಯನಕೆರೆಯ ಬೇಬಿ ಶೆಟ್ಟಿ ಹಾಗೂ ದಿವಂಗತ ಸಂಪ ಶೆಟ್ಟಿ ಅವರುಗಳ ಸುಪುತ್ರ ಪ್ರಜ್ಚಲ್ ಕುಮಾರ್ ಗುರುವಾಯನಕೆರೆ. ಆರ್ ಎನ್ ಎನ್ ಲೈವ್ ಜತೆ ತಮ್ಮ ಕಲಾಸಕ್ತಿಯ ಬಗೆಯನ್ನು ಹಂಚಿಕೊಂಡ ಅವರ ಮಾತುಗಳು ಇಲ್ಲಿವೆ.

ಯಕ್ಷಗಾನ ರಂಗದತ್ತ ಆಕರ್ಷಿತರಾಗಲು ಕಾರಣವೇನು?

ನನ್ನ ಬಾಲ್ಯದ ದಿನಗಳಲ್ಲಿ ನಮ್ಮ ಊರಾದ ಗುರುವಾಯನಕೆರೆಯ ಸುತ್ತಮುತ್ತ ಸಾಕಷ್ಟು ಟೆಂಟಿನ ಮೇಳಗಳು ಯಕ್ಷಗಾನವನ್ನು ಆಡುತ್ತಿದ್ದವು, ಆ ಬಯಲಾಟಗಳನ್ನು ತಪ್ಪದೇ ವೀಕ್ಷಿಸುತ್ತಿದ್ದ ನನಗೆ ನಾನೂ ಒಬ್ಬ ಯಕ್ಷಗಾನ ಕಲಾವಿದನಾಗಬೇಕೆಂಬ ಹಂಬಲ ಉಂಟಾಯಿತು.

ಯಕ್ಷಗಾನದ ಬಗೆಗಿನ ವಿದ್ಯಾಭ್ಯಾಸವನ್ನು ಎಲ್ಲಿ ಕಲಿತಿರಿ?

ನಮಗೆ ಯಕ್ಷಗಾನ ರಂಗದಲ್ಲಿ ಯಾವುದೇ ಪರಂಪರೆಯಿರಲಿಲ್ಲ. ನಮ್ಮ ಕುಟುಂಬದಲ್ಲಿ ಈ ರಂಗದಲ್ಲಿರುವವ ನಾನೊಬ್ಬನೆ. ಐದನೇ ತರಗತಿ ವಿಧ್ಯಾಭ್ಯಾಸ ಮುಗಿಸಿದ ನಂತರ ನನಗೆ ಹೆಚ್ಚು ಓದಲು ಕೆಲವೊಂದು ಕಾರಣಗಳಿಂದ ಸಾಧ್ಯವಾಗದೇ ಇದ್ದುದರಿಂದ ಯಕ್ಷಗಾನ ರಂಗದ ಲ್ಲಿ ಏನಾದರೂ ಸಾಧಿಸಬೇಕು ಎಂದು ನಿರ್ಧರಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದ ಯಕ್ಷಗಾನ ತರಬೇತಿ ಕೇಂದ್ರಕ್ಕೆ ಸೇರಿ ಅಲ್ಲಿ ಆರು ತಿಂಗಳ ತರಬೇತಿಯ ನಂತರ ಧರ್ಮಸ್ಥಳ ಮೇಳದಲ್ಲಿ ಮೊದಲ ಬಾರಿಗೆ ಗೆಜ್ಜೆ ಕಟ್ಟಿದೆ. ಆ ಮೇಳದಲ್ಲಿ ಕೆಲವು ವರ್ಷಗಳ ಕಾಲ ಇನ್ನಷ್ಟು ಕಲಿಯುವ ಅವಕಾಶ ದೊರಕಿತು.

ತಮ್ಮ ಯಕ್ಷಗಾನದ ಗುರುಗಳು ಯಾರು?

ವಕ್ವಾಡಿ ಶ್ರೀನಿವಾಸ ಬಲ್ಯಾಯರು ನನ್ನ ಮೊದಲ ಗುರು. ಆ ನಂತರ ನನ್ನನ್ನು ಇನ್ನಷ್ಟು ತಿದ್ದಿ ಒಂದು ಹಂತಕ್ಕೆ ಬೆಳೆಯುವಂತೆ ಮಾಡಿದವರು ದಿವಾಣ ಶಿವಶಂಕರ್ ಭಟ್. ನಾನು ಧರ್ಮಸ್ಥಳ ಮೇಳ ಬಿಟ್ಟ ನಂತರ ಒಂದು ವರ್ಷ ಕಟೀಲು ಮೇಳದಲ್ಲಿ ತಿರುಗಾಟ ಮಾಡಿದ ಕಾರಣ ಕುರಿಯ ಭಾಗವತರು ಕೂಡ ನನಗೆ ಸಾಕಷ್ಟು ವಿಷಯಗಳನ್ನು ಕಲಿಸಿದರು.

ತಾವು ಈವರೆಗೆ ತಿರುಗಾಟ ನಡೆಸಿರುವ ಮೇಳ ಬಗೆಗೆ ಹೇಳಬಹುದೆ?

ನಾನು ಧರ್ಮಸ್ಥಳ ಮೇಳದಲ್ಲಿನ ಸೇವೆಯ ನಂತರ ಕಟೀಲು ಮೇಳ ಸೇರಿ ಒಂದು ವರ್ಷ ತಿರುಗಾಟ ನಡೆಸಿದೆ. ಆ ನಂತರ ಆ ಸಮಯದಲ್ಲಿ ಪ್ರಾಬಲ್ಯ ಹೊಂದಿದ್ದ ತುಳು ಮೇಳವೆಂದೇ ಖ್ಯಾತಿ ಹೊಂದಿದ್ದ ಕುಂಟಾರು ಮೇಳದಲ್ಲಿ 2 ವರ್ಷ ತಿರುಗಾಟ ನಡೆಸಿದೆ. ಅದು ತುಳು ಮೇಳವಾದುದರಿಂದ ತುಳು ಭಾಷಾ ಜ್ಞಾನ ಹೆಚ್ಚಾಯಿತು. ಆ ನಂತರ ಎಡನೀರು ಮಠದ ಮೇಳ ಸೇರಿ ಕಲಾ ಸೇವೆ ಮಾಡಿದೆ. ಅಲ್ಲಿಂದ ಹೊಸನಗರ ಮೇಳವನ್ನು ಸೇರಿ ಏಳು ವರ್ಷಗಳಿಂದ ಇಲ್ಲಿಯೇ ಸೇವೆ ಸಲ್ಲಿಸುತ್ತಿದ್ದೇನೆ.

ತಾವು ಯಾವೆಲ್ಲಾ ವೇಷಗಳನ್ನು ನಿರ್ವಹಿಸುತ್ತೀರಿ?

ನಿತ್ಯವೇಷದಿಂದ ಹಿಡಿದು ಹೊಗಳಿಕೆ, ಹಾಸ್ಯ, ಕಟ್ಟುವೇಷ, ಸೇರಿದಂತೆ ಹಂತಹಂತವಾಗಿ ಎಲ್ಲಾ ವೇಷಗಳನ್ನು ನಿರ್ವಹಿಸಿದ್ದೇನೆ. ಸ್ತ್ರೀ ವೇಷವನ್ನು ಕೂಡ ನಿರ್ವಹಿಸಿದ್ದೇನೆ. ಇದೀಗ ಬಣ್ಣದ ವೇಷಗಳನ್ನು ಹೆಚ್ಚಾಗಿ ಹಾಕುತ್ತಿದ್ದರೂ ಕೂಡ ಕೆಲವೊಮ್ಮೆ ಸ್ತ್ರೀ ವೇಷ ಹಾಗೂ ಹಾಸ್ಯವನ್ನು ಕೂಡ ನಿರ್ವಹಿಸುತ್ತೇನೆ.

ತಮ್ಮ ರೋಲ್ ಮೋಡಲ್ ಯಾರಾಗಿದ್ದಾರೆ?

ನಾನು ಯಕ್ಷಗಾನ ರಂಗಕ್ಕೆ ಪ್ರವೇಶಿಸಿದ್ದು ಶ್ರೀಧರ್ ಭಂಡಾರಿಯವರಂತಾಗಬೇಕು ಎಂಬ ಕಾರಣಕ್ಕೆ. ಅವರ ಅಭಿಮನ್ಯು, ಅರ್ಜುನ ಪಾತ್ರಗಳು ನನಗೆ ಬಹಳ ಇಷ್ಟ. ಆದರೆ ನನ್ನ ದೇಹ ಪ್ರಕೃತಿಯಿಂದ ನನಗೆ ಆ ಪಾತ್ರಗಳನ್ನು ಮಾಡಲಾಗಿಲ್ಲ. ಆ ಕೊರಗು ಈಗಲೂ ಕಾಡುತ್ತಿದೆ. ಆ ಪಾತ್ರಗಳನ್ನು ಮಾಡಲಾಗದಿದ್ದರೂ ಅವರ ಜತೆ ಸಾಕಷ್ಟು ಪಾತ್ರಗಳನ್ನು ಮಾಡಿದ್ದೇನೆ ಎಂಬ ತೃಪ್ತಿಯಿದೆ.

ಬಣ್ಣದ ವೇಷದಲ್ಲಿ ಗುರುತಿಸಿಕೊಳ್ಳುವುದೆಂದರೆ ಕಷ್ಟದ ಕೆಲಸ ಆದರೆ ತಾವು ಇಷ್ಟು ಸಣ್ಣ ವಯಸ್ಸಿನಲ್ಲಿಯೇ ಅದನ್ನು ಸಾಧಿಸಿದ್ದೀರಿ ಹೇಗೆ ಸಾಧ್ಯವಾಯಿತು?

ನಾನು ಈ ರಂಗದಲ್ಲಿ ಏನನ್ನೂ ಸಾಧಿಸಿಲ್ಲ, ಇನ್ನಷ್ಟು ಹಾದಿಯನ್ನು ಕ್ರಮಿಸಬೇಕಾಗಿದೆ. ನಾನು ಇಲ್ಲಿ ಏನನ್ನೇ ಮಾಡಿದರೂ ಕೂಡ ಅದಕ್ಕೆ ನನ್ನ ಗುರುಗಳು ಹಾಗೂ ಯಕ್ಷಗಾನ ರಸಿಕರು ಕಾರಣ ಹೊರತು ನಾನಲ್ಲ. ಗುರುಗಳಾದ ಗೋವಿಂದ ಭಟ್ ರ ಅನುಗ್ರಹದಿಂದಾಗಿ ಇಂದು ನಾನು ಯಾವುದೇ ಪಾತ್ರವನ್ನು ನಿರ್ವಹಿಸಿದರೂ ಕೂಡ ಯಕ್ಷಗಾನ ರಸಿಕರು ಒಪ್ಪಿಕೊಂಡಿದ್ದಾರೆ. ಅವರ ಪ್ರೋತ್ಸಾಹವೇ ನನ್ನನ್ನು ಈವರೆಗೆ ತಂದಿದೆ.

ತಮಗೆ ತೃಪ್ತಿ ನೀಡಿದ ಪಾತ್ರಗಳು ಯಾವುವು?

ನಾನು ಹೆಚ್ಚಿನ ಎಲ್ಲಾ ಪಾತ್ರಗಳನ್ನು ನಿರ್ವಹಿಸಿದರೂ ಕೂಡ ನನ್ನ ಮನಸ್ಸಿಗೆ ತೃಪ್ತಿ ನೀಡಿದ ಪಾತ್ರಗಳೆಂದರೆ ಅಭಿಮನ್ಯು ಕಾಳಗದ ದುಶ್ಯಾಸನ, ದೇವಿಮಹಾತ್ಮೆಯ ವಿದ್ಯುನ್ಮಾಲಿ, ಗುರುದಕ್ಷಿಣೆಯ ಕೌರವ.

ಇಂದಿನ ದಿನಗಳಲ್ಲಿ ಯಕ್ಷಗಾನಕ್ಕೆ ಪ್ರೇಕ್ಷಕರು ಕಡಿಮೆ ಆಗುತ್ತಿದ್ದಾರೆ ಎಂದು ನಿಮಗನಿಸುತ್ತಿದ್ದೆಯಾ?

ಈ ಮಾತುಗಳು ಇಂದು ಎಲ್ಲೆಡೆ ಕೇಳಿ ಬರುತ್ತಿದೆ. ಆದರೆ ನನ್ನ ಪ್ರಕಾರ ಮೇಳದಲ್ಲಿ ಉತ್ತಮ ಕಲಾವಿದರಿದ್ದರೆ ಹಾಗೂ ಸಾಂಪ್ರದಾಯಿಕವಾಗಿ ಪ್ರದರ್ಶನ ನೀಡಿದರೆ ಪ್ರೇಕ್ಷಕರು ಬಂದೇ ಬರುತ್ತಾರೆ. ಕಳೆದ ಬಾರಿ ಮಂಗಳೂರಿನ ಪುರಭವನದಲ್ಲಿ ಒಂದು ವಾರಗಳ ಕಾಲ ನಡೆದ ಯಕ್ಷಗಾನ ಪ್ರದರ್ಶನದಲ್ಲಿ ಪ್ರತಿ ದಿನವೂ ಹೌಸ್ ಫುಲ್ ಪ್ರದರ್ಶನವನ್ನು ಕಂಡಿದ್ದೇ ಇದಕ್ಕೆ ಸಾಕ್ಷಿ ಎನ್ನಬಹುದು. ಇಂದು ವ್ಯವಹಾರಗಳು ಹೆಚ್ಚಾಗಿರುವುದರಿಂದ ಸಮಯ ಸಾಕಾಗದೇ ಇರಬಹುದು ಅದಕ್ಕಾಗಿ ಹೊಸನಗರ ಮೇಳವು ಕಾಲಮಿತಿ ಯಕ್ಷಗಾನವನ್ನು ಪ್ರಾರಂಭಿಸಿತು. ನಮ್ಮ ಮೇಳಕ್ಕೆ ಎಲ್ಲಿಯೂ ಸಾಕಷ್ಟು ಪ್ರೇಕ್ಷಕರು ಸೇರುತ್ತಾರೆ.

ಗೆಜ್ಜೆ ಬಿಚ್ಚಿದ ದಿನಗಳು ಕಲಾವಿದನಿಗೆ ಕಷ್ಟದ ದಿನಗಳು ಎಂಬ ಮಾತಿನ ಬಗ್ಗೆ ತಮ್ಮ ಅಭಿಪ್ರಾಯ?

ಹೌದು ಹಿಂದಿನ ದಿನಗಳಲ್ಲಿ ಪತ್ತನಾಜೆಗೆ ಗೆಜ್ಜೆ ಬಿಚ್ಚಿದ ನಂತರ ಕೆಲವು ತಿಂಗಳು ಉದ್ಯೋಗವಿಲ್ಲದೇ ಇರಬೇಕಾದ ಪರಿಸ್ಥಿತಿ ಇತ್ತು. ಆದರೆ ಇಂದು ವಸ್ತುಸ್ಥಿತಿ ಬದಲಾಗಿದೆ ಹೆಚ್ಚಿನ ಮೇಳಗಳು ಎಂಡೋಮೆಂಟ್ ಆಗಿರುವುದರಿಂದ ಕಲಾವಿದರಿಗೆ ವರ್ಷವಿಡೀ ಸಂಬಳವಿರುತ್ತದೆ. ಅಷ್ಟು ಮಾತ್ರವಲ್ಲದೆ ಪರವೂರಿನಲ್ಲಿ ಪ್ರದರ್ಶನ ನೀಡಲು ಮೇಳಗಳು ಹಾಗೂ ಕಲಾವಿದರು ತೆರಳುವುದರಿಂದ ಸಂಪಾದನೆಯಾಗುತ್ತದೆ.

ಯಕ್ಷಗಾನ ಕಲಾವಿದನಿಗೆ ಜೀವನ ಭದ್ರತೆ ಇದೆ ಎಂದು ಅನಿಸುತ್ತಿದೆಯಾ?

ಇಲ್ಲ, ಯಕ್ಷಗಾನ ಕಲಾವಿದ ಗೆಜ್ಜೆ ಕಟ್ಟಿ ಕುಣಿಯುವವರೆಗೆ ಅವನಿಗೆ ಅಲ್ಲಿಯಾದರೂ ಸಂಬಾವನೆಯಿರುತ್ತದೆ. ಆದರೆ ವಯಸ್ಸಾಗಿ ವೇಷ ಹಾಕುವುದನ್ನು ನಿಲ್ಲಿಸಿದ ನಂತರ ಕಷ್ಟ ಪಡಬೇಕಾದ ಪರಿಸ್ಥಿತಿ. ಇದಕ್ಕೆ ನಮ್ಮ ಅಕಾಡೆಮಿ ಹಾಗೂ ಸರ್ಕಾರ ಸೂಕ್ತ ರೀತಿಯ ವ್ಯವಸ್ಥೆ ಮಾಡಿದ್ದರೆ ಚೆನ್ನಾಗಿತ್ತು ಎಂಬುದು ನನ್ನ ಅಭಿಪ್ರಾಯ.

ಯಕ್ಷಗಾನ ಅಕಾಡೆಮಿಯ ಕಾರ್ಯ ತೃಪ್ತಿ ತಂದಿದೆಯಾ?

ಪರವಾಗಿಲ್ಲ, ಇತ್ತೀಚಿನ ದಿನಗಳಲ್ಲಿ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಯಕ್ಷಗಾನ ತರಬೇತಿ ಶಿಬಿರಗಳನ್ನು ಏರ್ಪಡಿಸಿ ಉತ್ತಮ ಪ್ರೋತ್ಸಾಹ ನೀಡುತ್ತಿದ್ದಾರೆ. ಅಕಾಡೆಮಿಯು ಯಕ್ಷಗಾನ ರಂಗದಲ್ಲಿರುವ ವೃತ್ತಿಪರ ಕಲಾವಿದರ ಬಗೆಗೆ ಇನ್ನಷ್ಟು ಗಮನ ಹರಿಸಿ ಅವರಿಗೆ ಬೇಕಾದ ವ್ಯವಸ್ಥೆಗಳನ್ನು ಕಲ್ಪಿಸಲು ಸರ್ಕಾರವನ್ನು ಒತ್ತಾಯಿಸುವ ಅವಶ್ಯಕತೆಯಿದೆ. ಹಾಗಾಗಿ ಅಕಾಡೆಮಿಗೆ ವೃತ್ತಿಪರರನ್ನು ಸದಸ್ಯರನ್ನಾಗಿ ಆರಿಸಿದರೆ ಇನ್ನಷ್ಟು ಉತ್ತಮ ಕೆಲಸಗಳಾಗಬಹುದು ಎಂಬುದು ನನ್ನ ಅನಿಸಿಕೆ.

ಇಂದಿನ ಯುವ ಜನಾಂಗ ಯಕ್ಷಗಾನದ ಕಡೆಗೆ ಆಕರ್ಷಿತವಾಗುತ್ತಿದ್ದಾರೆಯೇ?

ಪರ್ವಾಗಿಲ್ಲ, ಕೆಲವು ಯುವಕರು ಮುಂದೆ ಬರುತ್ತಿದ್ದಾರೆ. ಆದರೆ ಅವರಿಗೆ ಇದನ್ನು ವೃತ್ತಿಯನ್ನಾಗಿ ಸ್ವೀಕರಿಸಲು ಅವರ ಮನೆಯಲ್ಲಿ ಪ್ರೋತ್ಸಾಹ ದೊರಕುತ್ತಿಲ್ಲ. ಯಾಕೆಂದರೆ ವೃತ್ತಿಪರ ಕಲಾವಿದರು ಸಂಕಷ್ಟದ ಜೀವನ ನಡೆಸಬೇಕು ಎಂಬ ಕಾರಣಕ್ಕೆ. ಇಂದಿನ ದಿನಗಳಲ್ಲಿ ಯಕ್ಷಗಾನವು ಒಂದು ಕಲೆಯಾಗಿ ಉಳಿದಿಲ್ಲ. ಹೆಚ್ಚಿನವರಿಗೆ ಇದು ಉಪಕಸುಬಾಗಿದೆ. ಹಾಗಾಗಿ ಯುವಕರನ್ನು ಆಕರ್ಷಿಸಿದರೂ ಕೂಡ ಅವರಿಗೆ ಸೂಕ್ತ ಪ್ರೋತ್ಸಾಹ ಸಿಗುತ್ತಿಲ್ಲ ಎನ್ನಬಹುದು.

ಈ ರಂಗದಲ್ಲಿ ತಮ್ಮ ಮುಂದಿನ ಕಾರ್ಯ ಸಾಧನೆಗಳ ಬಗೆಗೆ ಹೇಳಬಹುದೆ?

ಕಲಾರಸಿಕರು ಗುರುತಿಸುವಷ್ಟರ ಮಟ್ಟಿಗೆ ಈ ರಂಗದಲ್ಲಿ ಬೆಳೆದಿದ್ದೇನೆ. ನನಗೆ ಬಾಲ್ಯದಲ್ಲಿ ಎಂ.ಎ. ವಿದ್ಯಾಭ್ಯಾಸ ಮಾಡಿ ದೊಡ್ಡ ಅಧಿಕಾರಿಯಾಗಬೇಕೆಂಬ ಕನಸಿತ್ತು. ಆದರೆ ಅದು ಸಾಧ್ಯವಾಗದೇ ಇದ್ದರೂ ಕೂಡ ಈ ರಂಗದಲ್ಲಿ ಸಾಕಷ್ಟು ಬೆಳೆದಿದ್ದೇನೆ. ಇದೀಗ ವಿದ್ಯಾಭ್ಯಾಸ ಮುಂದುವರೆಸುವ ಯೋಚನೆಯಿದ್ದರೂ ಕೂಡ ರಂಗದ ಕೆಲಸದಿಂದ ಸಮಯ ಸಾಕಾಗುತ್ತಿಲ್ಲ.

ಯಕ್ಷಗಾನವನ್ನು ಹೊರತು ಪಡಿಸಿ ತಮ್ಮ ಆಸಕ್ತಿಯ ಕ್ಷೇತ್ರಗಳು?

ನಾಟಕದಲ್ಲಿ ಪಾತ್ರ ನಿರ್ವಹಿಸುತ್ತೇನೆ. 'ಗೊತ್ತಾನಗ ಪೊರ್ತಾಂಡ್ 'ಎಂಬ ತುಳು ಧಾರಾವಾಹಿಯಲ್ಲಿಯೂ ಪಾತ್ರ ನಿರ್ವಹಿಸಿದ್ದೇನೆ. ಸಮಯ ಸಿಕ್ಕಾಗ ತಾಳಮದ್ದಳೆಯಲ್ಲಿಯೂ ಭಾಗವಹಿಸುತ್ತೇನೆ.

ಯಕ್ಷಗಾನ ರಂಗದಲ್ಲಿ ಆಸಕ್ತಿ ಇರುವ ಯುವಕರಿಗೆ ತಮ್ಮ ಕಿವಿ ಮಾತುಗಳೇನು?

ನಾನು ಯಾರಿಗೂ ಕಿವಿ ಮಾತು ಹೇಳುವಷ್ಟು ದೊಡ್ಡವನಾಗಿ ಬೆಳೆದಿಲ್ಲ. ಆದರೂ ಅನುಭವದಿಂದ ಹೇಳುತ್ತೇನೆ. ಈ ರಂಗಕ್ಕೆ ಹಣವನ್ನು ಬೆನ್ನತ್ತಿಕೊಂಡು ಬರಬೇಡಿ. ಕಲಾಸೇವೆ ಮಾಡುವೆನೆಂದು ಬನ್ನಿ ಹಣ ತನ್ನಷ್ಟಕ್ಕೇ ಬರುತ್ತದೆ. ಇನ್ನೊಂದು ಪ್ರಮುಖ ವಿಷಯವೆಂದರೆ ರಂಗಕ್ಕೆ ಬಂದ ನಂತರ ದುರಾಭ್ಯಾಸಕ್ಕೆ ಬಲಿ ಬೀಳಬೇಡಿ, ನಾವು ಬಲಿಬಿದ್ದು ಅದರಿಂದ ಹೊರಬರಲು ಪಡಬಾರದ ಪಾಡು ಪಡುತ್ತಿದ್ದೇವೆ ಹಾಗಾಗಿ ಯಾವುದೇ ದುರಾಭ್ಯಾಸಕ್ಕೆ ದಾಸರಾಗಬೇಡಿ.

ಕೊನೆಯದಾಗಿ ಏನು ಹೇಳಲು ಬಯಸುತ್ತೀರಿ?

ಇಂದು ವೃತ್ತಿಪರ ಕಲಾವಿದರಿಗೆ ಸರ್ಕಾರವು ಹೆಚ್ಚಿನ ನೆರವು ನೀಡುವ ವ್ಯವಸ್ಥೆ ಮಾಡಬೇಕು, ಆರ್ಥಿಕವಾಗಿ ವೃತ್ತಿಪರರು ಯಾವಾಗಲೂ ಬಳಲುತ್ತಿರುತ್ತಾರೆ. ಹವ್ಯಾಸಿಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುವ ಬದಲು ವೃತ್ತಿಪರರನ್ನು ಕೂಡ ಪರಿಗಣಿಸಲಿ ಎಂಬುದು ನನ್ನ ಆಶಯ. ಸರ್ಕಾರ ಬಿಡುಗಡೆ ಮಾಡುವ ಅನುದಾನಗಳನ್ನು ಕೂಡ ಅನ್ಯರು ಪಡೆಯುವ ಬದಲು ಯಕ್ಷಗಾನ ರಂಗದವರಿಗೇ ಅವುಗಳು ದೊರೆಯುವಂತಾಗಲಿ ಎಂದು ಎಲ್ಲಾ ಕಲಾವಿದರ ಆಶಯ.

ಕೃಪೆ : http://rnnlive.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
-(7/2/2016)
supr .. i m big fan f u
Aajnha soham(5/16/2014)
lekhana chennagide. aadare.... vakvadi srinivasa balyaya emballi, tharanatha vorkady endaagabekittu. allave...??




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ